Showing posts with label ಕಥೆಗಳ ಸಂಗ್ರಹ. Show all posts
Showing posts with label ಕಥೆಗಳ ಸಂಗ್ರಹ. Show all posts

Tuesday, November 3, 2020

Top family story

 Top family story


ಪತ್ನಿ ತೀರಿಕೊಂಡು ಇಂದಿಗೆ ನಾಲ್ಕು ದಿನಗಳಾಯಿತು.... 

ಆಕೆಯ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಸಂಬಂಧಿಕರು ಒಬ್ಬೊಬ್ಬರಾಗಿ ಹೊರಟು ಹೋದರು... 


ಕೊನೆಗೆ ಸಾವಿನ ಗಂಧವಿರುವ ಆ ಮನೆಯಲ್ಲಿ ನಾನು ಮತ್ತು ನನ್ನ ಮಕ್ಕಳು ಮಾತ್ರವಾಗಿ ಬಾಕಿಯಾದೆವು...


ಆಕೆ ಜೊತೆಯಲ್ಲಿಲ್ಲ ಎಂಬುದನ್ನು ನಂಬುವುದಕ್ಕೂ ನನಗೆ ಕಷ್ಟವಾಗುತ್ತಿದೆ....


ರೀ... ಇಲ್ಲಿ ನೋಡಿ... ಅಂತ ಹೇಳುತ್ತಾ ನನ್ನ ಬಳಿ ಓಡಿ ಬರುವುದನ್ನು ನಿನ್ನೆ ಎಂಬಂತೆ ನಾನು ನೆನಪಿಸಿಕೊಂಡೆ...


ನಮ್ಮನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಸೋತು ಹೋದ ನತದೃಷ್ಟೆಯಾಗಿದ್ದಳು ಆಕೆ..... 


ನಮ್ಮ ಮೇಲಿನ ಅತಿಯಾದ ಪ್ರೀತಿಯಿಂದಲೇ ಇರಬೇಕು ಆಕೆ ಯಾವತ್ತೂ ನಮ್ಮಿಂದ ದೂರ ಹೋಗಿರಲಿಲ್ಲ....


ತವರು ಮನೆಗೆ ಹೋದರೂ ಕೂಡಾ ಮನೆಯಲ್ಲಿ ಅವರು ಮತ್ತು ಮಕ್ಕಳು ಮಾತ್ರ ಇರೋದು ಅಂತ ಕಾರಣ ಹೇಳಿ ಸಂಜೆಯಾಗುತ್ತಲೇ ಓಡೋಡಿ ಮನೆ ತಲುಪುತ್ತಿದ್ದಳು... 

ನಿಜವಾಗಿಯೂ ಆಕೆ ಆಕೆಯ ಮನೆಗೆ ಹೋಗುವುದು ನನಗೆ ಇಷ್ಟವಿರಲಿಲ್ಲ.... ಅದು ಆಕೆಯ ಮೇಲಿನ ಪ್ರೀತಿಯಿಂದಾಗಿರಲಿಲ್ಲ. ಬದಲಾಗಿ, ಆಕೆ ಹೋದರೆ, ನಮಗೆ ಅಡುಗೆ ಮಾಡಿ ಬಡಿಸುವವರು ಯಾರೂ ಇಲ್ಲ ಎಂಬ ಸ್ವಾರ್ಥವಾದ ಕಾರಣವಾಗಿತ್ತು...


ನಾನು ಮತ್ತು ಮಕ್ಕಳು ರಜಾದಿನಗಳಲ್ಲಿ ಟಿ ವಿಯ ಮುಂದೆ ಒಂದೊಂದು ಕಾರ್ಯಕ್ರಮವನ್ನು ನೋಡಿ ಖುಷಿಪಡುವಾಗ, ಅಡುಗೆ ಮನೆಯಲ್ಲಿ ಅಡುಗೆ ಮಾಡುವುದರಲ್ಲಿ ನಿರತಳಾಗಿರುತ್ತಿದ್ದಳು ಆಕೆ... 


ಯಾವಾಗಲಾದರೂ ಸ್ವಲ್ಪ ಟಿ ವಿ ನೋಡೋದಕ್ಕೆ ನಮ್ಮ ಜೊತೆ ಬಂದು ಕುಳಿತರೆ, - ಅಮ್ಮಾ ನೀರು...

ಲೇ.. ಸ್ವಲ್ಪ ಟೀ ಮಾಡು...

ಅಂತ ಎಲ್ಲಾ ಹೇಳಿ ಆಕೆಯನ್ನು ನಾವು ಆ ಅಡುಗೆ ಕೋಣೆಗೇ ವಾಪಾಸ್ ಕಳುಹಿಸುತ್ತಿದ್ದೆವು...


ನಾನು ಹೇಳದೆಯೇ ಎಲ್ಲವನ್ನೂ ಅರ್ಥ ಮಾಡಿಕೊಂಡು ನನ್ನ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದಳು...  


ಇಂದು ಈಗ ಒಂದು ಕಪ್ ಟೀ ಮಾಡಿಕೊಡಲಿಕ್ಕೋ...,

ಒಂದು ಲೋಟ ನೀರು ಕೊಡಲಿಕ್ಕೋ, ಆಕೆ ಜೊತೆಯಲ್ಲಿಲ್ಲ ಎಂಬ ಕಟು ಸತ್ಯವನ್ನು ನಾನು ನೋವಿನಿಂದಲೇ ಅರಿತೆ.....


ಯಾವುದಕ್ಕೂ ಆಕೆ ದೂರುಗಳನ್ನು ಹೇಳಿದವಳಲ್ಲಾ... ಒಂದು ಒಳ್ಳೆಯ ಸೀರೆ ಕೂಡಾ ನಾನು ಖರೀದಿಸಿಕೊಟ್ಟಿರಲಿಲ್ಲ‌......

ಒಂದು ಸಿನೆಮಾ ನೋಡಲು ಕೂಡಾ ಆಕೆಯನ್ನು ಜೊತೆಯಲ್ಲಿ ಕರಕ್ಕೊಂಡೋಗಿರಲಿಲ್ಲ...

ಕ್ಲಬ್, ಪಾರ್ಟಿ ಅಂತ ನಾನು ತಡವಾಗಿ ಮನೆಗೆ ಬರುವಾಗ ಆಕೆ ಗಾಬರಿಯಿಂದ ಯಾಕೆ ತಡವಾಯಿತು ಅಂತ ಕೇಳುವಾಗ ನಾನು ಆಕೆಯ ಪ್ರಶ್ನೆಯನ್ನು ಲೆಕ್ಕಿಸದೆ ನಿರ್ಲಕ್ಷಿಸುತ್ತಿದ್ದೆ.....


ರೀ... ನೋಡಿ.. ಕರೆಂಟ್ ಬಿಲ್ ಪಾವತಿಸಬೇಕಾದ ಕೊನೆಯ ದಿನ ನಾಳೆ... 


ನೋಡಿ ಹಾಲಿನವನಿಗೆ ದುಡ್ಡು ಕೊಡಬೇಕಾದ ಸಮಯ ಹತ್ತಿರ ಬಂತು...


ಪೇಪರ್ ನವ ನಿನ್ನೆ ದುಡ್ಡು ಕೇಳಿ ಹೋದ...


ಮಕ್ಕಳ ಶಾಲೆಯ ಫೀಸ್ ನಾಳೆನೇ ಕೊಡಬೇಕು ರೀ.....


ನೋಡಿ ನಿಮ್ಮ ಬಿ ಪಿ ಯ ಮಾತ್ರೆ ಖಾಲಿಯಾಗಿದೆ...


ಹಾಗೆ ಆಕೆಯ ಬಯಕೆ ಮತ್ತು ಬೇಡಿಕೆಗಳನ್ನು ಬಿಟ್ಟು, ಉಳಿದ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಆಕೆ ನೆನಪಿಸುವಳು.....


ಇನ್ನು ಹಾಗೆ ನೆನಪಿಸುವವರು ಯಾರೂ ಇಲ್ಲ..


ರಾತ್ರಿ ಕೆಲಸವೆಲ್ಲಾ ಮುಗಿಸಿ, ನನ್ನ ಪಕ್ಕದಲ್ಲಿ ಬಂದು ಮಲಗುವಾಗ, ಎದೆ ನೋಯುತ್ತಿದೆ, ಕಾಲು ನೋಯುತ್ತಿದೆ ಅಂತ ಆಕೆ ಹೇಳುವಾಗ, - ಅದು ನಿನಗೆ ಮನೆಯಲ್ಲಿ ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುತ್ತಿಯಲ್ಲಾ..

ಬೆಳಿಗ್ಗೆ ಐದು ಗಂಟೆಗೆ ಎದ್ದು ಸ್ವಲ್ಪ ವಾಕಿಂಗ್ ಮಾಡಿದರೆ ಎಲ್ಲಾ ಸರಿಹೋಗುತ್ತೆ.. ಅಂತ ನಾನು ಹೇಳುವಾಗ, ಆಕೆಯ ಕಣ್ಣುಗಳು ತುಂಬುವುದನ್ನು ನಾನು ನೋಡದ ಹಾಗೆ ನಟಿಸುತ್ತಾ ತಿರುಗಿ ಮಲಗುತ್ತಿದ್ದೆ...


ಕೊನೆಗೆ ಆ ಎದೆ ನೋವು ಹಾರ್ಟ್ ಅ್ಯಟೇಕ್ ನ ರೂಪದಲ್ಲಿ ಬಂದು ಆಕೆಯನ್ನು ಕರಕೊಂಡು ಹೋಗುವಷ್ಟರಲ್ಲಿ ಆಕೆಯ ನೋವನ್ನು ಅರ್ಥಮಾಡಿಕೊಳ್ಳಲು ತುಂಬಾ ತಡಮಾಡಿಬಿಟ್ಟೆ...


ಮನೆಗೆಲಸಗಳನ್ನು ಮಾಡುತ್ತಾ , ಆಕೆಯ ನೆನಪುಗಳೊಂದಿಗೆ ಇಂದಿಗೆ ನಾಲ್ಕು ದಿನಗಳನ್ನು ದೂಡಿ ಮುಗಿಸಿದೆ... ಮನೆಗೆಲಸ ಅಷ್ಟು ಸುಲಭವಲ್ಲ ಎಂಬ ಕಟುಸತ್ಯವನ್ನು ಬಹುಬೇಗನೆ ಅರಿತುಕೊಂಡೆ..... 


ಆಕೆಯನ್ನು ದೂರಿದ ದಿನಗಳನ್ನು, ಚುಚ್ಚು ಮಾತುಗಳಿಂದ ಆಕೆಯನ್ನು ನೋಯಿಸಿದ ದಿನಗಳನ್ನು ನಾನು ಶಪಿಸುತ್ತಾ ಸ್ವತಃ ಮರುಗತೊಡಗಿದೆ....


ನಾನು ಕೆಲಸಕ್ಕೆ ಹೋಗಲು ಹೊರಡುವಾಗ, ಐರನ್ ಮಾಡಿಟ್ಟ ಬಟ್ಟೆಗಾಗಿ ಹುಡುಕಾಡಿದೆ.....


ರೀ... ನೀವು ಈ ಕಂದು ಬಣ್ಣದ ಶರ್ಟ್ ಧರಿಸಿ... ಇದು ನಿಮಗೆ ಚೆನ್ನಾಗಿ ಕಾಣಿಸುತ್ತಿದೆ. ಅಂತ ಆಕೆ ಹೇಳುವ ಹಾಗೆ ನನಗೆ ಅನಿಸಿತು......


ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ನನಗಾಗಿ ಯಾರೂ ಬಾಗಿಲು ತೆರೆಯಲಿಲ್ಲ...... 

ನನ್ನ ಬರುವಿಕೆಗಾಗಿ ಯಾರೂ ಕಾದು ಕೂರಲಿಲ್ಲ....

ಯಾಕೆ ಇಷ್ಟು ತಡಮಾಡಿ ಬಂದಿದ್ದೀರಿ ಅಂತ ಯಾರೂ ನನ್ನತ್ರ ಗಾಬರಿಯಿಂದ ಕೇಳಲಿಲ್ಲ....


ಕೊನೆಗೆ ನಾನು ಬಾಗಿಲನ್ನು ದೂಡಿ ಒಳಗೆ ಹೋದಾಗ, ಹಾಲ್ ನಲ್ಲಿ ನಾನು ಬಂದದ್ದು ಕೂಡಾ ಅರಿಯದೆ, ಮಕ್ಕಳು ಮೊಬೈಲ್ ನಲ್ಲಿ ಮಗ್ನರಾಗಿದ್ದರು... ಅವರ ಪಕ್ಕದಲ್ಲಿ ತಿಂದ ಪಾತ್ರೆಗಳು ಎಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನಾನು ದುಃಖದಿಂದ ನೋಡಿದೆ....


ಆಕೆಯಿದ್ದಾಗ ಸ್ವಚ್ಛವಾಗಿದ್ದ ಮನೆಯು ಇಂದು ಆಕೆಯಿಲ್ಲದಾಗ ಹೀನವಾಗಿ ಇರುವ ಮನೆಯ ಅವ್ಯವಸ್ಥೆಯನ್ನು ನೋಡಿ, ನನ್ನ ಹೃದಯವು ಮರುಗಿತು...


ಸ್ನಾನ ಮುಗಿಸಿ, ಒಂದು ಕಪ್ ಟೀ ಗಾಗಿ ನಾನು ಅಡುಗೆ ಮನೆಗೆ ಹೋದೆ... 

ವಾಷ್ ಬೆಯ್ಸನ್ ನಲ್ಲಿ 

ಊಟ ಮಾಡಿದ ತಟ್ಟೆಗಳು ಮತ್ತು ನೂಡಲ್ಸ್ ನ ಖಾಲಿ ಪ್ಯಾಕೆಟ್ ಗಳು ಮಾತ್ರ ನನಗೆ ಕಾಣಿಸಿತು....


ಪಾತ್ರೆಗಳನ್ನೆಲ್ಲಾ ಕ್ಲೀನ್ ಮಾಡಿ, ಫ್ರಿಡ್ಜ್ ನಿಂದ ಒಂದು ಆ್ಯಪಲ್ ತೆಗೆದು ಕಟ್ ಮಾಡಿ ತಿಂದು ಬೆಡ್ ರೂಮಿಗೆ ಬಂದು ಮಲಗಿದೆ....


ಲೈಟ್ ಆಫ್ ಮಾಡುವುದಕ್ಕೆ ಮುಂಚೆ ಗೋಡೆಯ ಮೇಲೆ ತೂಗುಹಾಕಿದ ಆಕೆಯ ಮುಗುಳ್ನಗುವ ಭಾವಚಿತ್ರವನ್ನೊಮ್ಮೆ ತುಂಬಾ ದುಃಖದಿಂದಲೇ ನಾನು ನೋಡಿದೆ.....,.


ಆಕೆಯನ್ನು ನಿರ್ಲಕ್ಷಿಸದೇ ಇದ್ದಿದ್ದರೆ, ಇಂದು ನಾನು ಸಂತೋಷದಿಂದ ಇರುತ್ತಿದ್ದೆ ಅಂತ ನೆನೆದು ಎರಡು ಹನಿ ಕಣ್ಣೀರು ನನ್ನ ಕಣ್ಣಿಂದ ಸುರಿಯಿತು.....


ಈ ಕಥೆಯನ್ನು ಓದಿದವರಲ್ಲಿ ಈ ಕಥೆಯ ಕಥಾ ನಾಯಕ ನಾನೇ ಅಂತ ಯೋಚಿಸುವವರು ಅನೇಕರು ಇರಬಹುದಲ್ಲವೇ...?

ಅಂತಹವರಿಗೆ ನಾನು ಹೇಳಬಯಸುವುದೇನೆಂದರೆ - 

ಕಣ್ಣುಗಳಿರುವಾಗಲೇ ಅದರ ಬೆಲೆ ಗೊತ್ತಾಗುವುದು...

ಕಣ್ಣಿನ ದೃಷ್ಟಿ ನಷ್ಟವಾದ ನಂತರ ಕಣ್ಣಿನ ಮಹತ್ವವನ್ನು ಹೇಳಿ ಏನೂ ಪ್ರಯೋಜನವಿಲ್ಲ...

Friday, October 30, 2020

ಒಂದು ಕಪ್ ಮೊಸರೂ, ಅಪ್ಪನ ಬಿಸಿಯುಸಿರೂ. ಕಥೆ

 *ತುಂಬಾ ಮನಮುಟ್ಟುವ ಕಥೆ ದಯವಿಟ್ಟು ಸಂಪೂರ್ಣ ಓದಿ.*


*ಒಂದು ಕಪ್ ಮೊಸರೂ,

ಅಪ್ಪನ ಬಿಸಿಯುಸಿರೂ. *


ಬೆಂಗಳೂರಿನ ಯಶವಂತಪುರದಿಂದ ಹಾಸನಕ್ಕೆ ಅಥವಾ ತುಮಕೂರಿಗೆ ಹೋಗುವ ದಾರಿಯಲ್ಲೇ ಗೊರಗುಂಟೆಪಾಳ್ಯವಿದೆ. ಅಲ್ಲಿಂದ ಹೆಬ್ಬಾಳಕ್ಕೆ ಹೋಗುವ ರಸ್ತೆಯಲ್ಲಿ ಅರ್ಧ ಕಿಲೋ ಮೀಟರ್ ಹೋದರೆ,ಸ್ಟ್ಯಾಂಡರ್ಡ್ ಮೆಕ್ಯಾನಿಕಲ್ ವರ್ಕ್ಸ್ ಫ್ಯಾಕ್ಟರಿ ಸಿಗುತ್ತದೆ. ಹೆಚ್ಚಿನ ಸದ್ದಾಗದಂತೆ ಕಾರ್ಯ ನಿರ್ವಹಿಸುವ ವಿದೇಶಿ ನಿರ್ಮಿತ ಯಂತ್ರಗಳು ಅಲ್ಲಿವೆ. ಫ್ಯಾನ್, ರೆಫ್ರಿಜರೇಟರ್, ಟಿ.ವಿಗಳಿಗೆ ಅಗತ್ಯವಾಗಿ ಬೇಕಾಗುವ ಬಿಡಿಭಾಗಗಳನ್ನು ಅಲ್ಲಿ ಉತ್ಪಾದಿಸಲಾಗುತ್ತದೆ. ಎಲ್ಲಾ ಪ್ರಮುಖ ಕಂಪನಿಗಳಿಗೂ ಬಿಡಿ ಭಾಗಗಳನ್ನು ಸಪ್ಲೈ ಮಾಡುತ್ತಿರುವುದರಿಂದ ಸ್ಟ್ಯಾoಡರ್ಡ್ ಮೆಕ್ಯಾನಿಕಲ್‌ಸ್‌ ಫ್ಯಾಕ್ಟರಿಗೆ ಒಳ್ಳೆಯ ಹೆಸರೂ ಇದೆ. 


ಈ ಫ್ಯಾಕ್ಟರಿ ಮಾಲೀಕನೇ ರಂಗಸ್ವಾಮಿ. ಈತ, ಅರಸೀಕೆರೆ ಸಮೀಪದ ಹಳ್ಳಿಯವನು. ಸಿದ್ದಗಂಗಾ ಮಠದಲ್ಲಿ ಹೈಸ್ಕೂಲು, ತುಮಕೂರಿನಲ್ಲಿ ಐಟಿಐ ಓದಿದವನು ಸೀದಾ ಬಂದಿದ್ದು ಪೀಣ್ಯಕ್ಕೆ. ಹೆಲ್ಪರ್ ಆಗಿ ಒಂದು ಫ್ಯಾಕ್ಟರಿ ಸೇರಿಕೊಂಡವನು ಐದು ವರ್ಷದಲ್ಲಿ ಎಲ್ಲ ಬಗೆಯ ಕೆಲಸ ಕಲಿತ. ನಂತರ ಮಾರ್ಕೆಟಿಂಗ್ ಮ್ಯಾನೇಜರ್ ಆದ. ಮಾರಾಟಕ್ಕೆ ಸಂಬಂಧಿಸಿದ ಆಳ-ಅಗಲಗಳು ರಂಗಸ್ವಾಮಿಗೆ ಪರಿಚಯವಾದದ್ದೇ ಆಗ. ಹತ್ತಾರು ಕಂಪನಿಗಳ ಮುಖ್ಯಸ್ಥರ ಒಡನಾಟ, ವಿಶ್ವಾಸ, ಅಲ್ಲಿನ ವಹಿವಾಟುಗಳಿಗೆ ಇರುವ ಬೇಡಿಕೆಯನ್ನು ಗಮನಿಸಿದ ನಂತರ, ಹೇಗಿದ್ರೂ ಎಲ್ಲ ಕೆಲಸದ ಬಗ್ಗೆ ಗೊತ್ತಿದೆ. ಒಂದೆರಡು ಕಂಪನಿಗಳಿಂದ ಕಾಂಟ್ರಾಕ್ಟ್ ತಗೊಂಡು ಸ್ಪೇರ್ ಪಾರ್ಟ್ಸ್ ಉತ್ಪಾಾದನೆಯ ಸ್ವಂತ ಫ್ಯಾಕ್ಟರಿ ಶುರು ಮಾಡಿದ್ರೆ ಹೇಗೆ ಎಂಬ ಯೋಚನೆಯೂ ಅವನಿಗೆ ಬಂತು. 


ರಂಗಸ್ವಾಮಿ ತಡಮಾಡಲಿಲ್ಲ. ಒಂದು ಪುಟ್ಟ ಶೆಡ್‌ನಲ್ಲಿ ಫ್ಯಾಕ್ಟರಿಯನ್ನು ಆರಂಭಿಸಿಯೇಬಿಟ್ಟ. ಯೌವನದ ಹುಮ್ಮಸ್ಸು ಹಾಗೂ ಗೆಲ್ಲಬೇಕೆಂಬ ಹಠದಿಂದ ಹಗಲಿರುಳೂ ದುಡಿದ. ಪರಿಣಾಮ, ಕೆಲವೇ ದಿನಗಳಲ್ಲಿ ರಂಗಸ್ವಾಮಿಯ ಬ್ಯಾಂಕ್ ಬ್ಯಾಲೆನ್ಸ್ ದುಪ್ಪಟ್ಟಾಯಿತು. ಅದುವರೆಗೂ ಸೆಕೆಂಡ್‌ ಹ್ಯಾಂಡ್ ಹೀರೋ ಹೋಂಡಾದಲ್ಲಿ ಓಡಾಡುತ್ತಿದ್ದವನು, ಒಟ್ಟಿಗೇ ಎರಡು ಕಾರ್ ಖರೀದಿಸುವಷ್ಟು ಶ್ರೀಮಂತನಾದ. 25 ಮಂದಿಗೆ ಕೆಲಸ ಕೊಟ್ಟ. ಫ್ಯಾಕ್ಟರಿಗೆ ಸ್ವಂತ ಬಿಲ್ಡಿಂಗ್ ಕಟ್ಟಿಸಿದ. ವಾಸಕ್ಕೆ, ಯಶವಂತಪುರದಲ್ಲೇ ಒಂದು ಮನೆ ಖರೀದಿಸಿದ. ಇಷ್ಟೆಲ್ಲ ಆದಮೇಲೆ, ರಂಗಸ್ವಾಮಿಯ ಯಶೋ ಗಾಥೆ ನೂರಾರು ಮಂದಿಯನ್ನು ತಲುಪಿತು. ಹೇಗಿದ್ದವನು ಹೇಗಾಗಿಬಿಟ್ಟ ಅಲ್ವ ಎಂದು ಎಲ್ಲರೂ ಬೆರಗಾಗುವ ವೇಳೆಗೇ, ಹಳೇ ಪರಿಚಯದ ಹುಡುಗಿಯೊಂದಿಗೆ ಮದುವೆಯಾದ ರಂಗಸ್ವಾಮಿ, ವರ್ಷದ ನಂತರ ಗಂಡು ಮಗುವಿನ ತಂದೆಯೂ ಆದ. 


ಕೈ ತುಂಬಾ ವರಮಾನ ಕೊಡುವ ಕೆಲಸ, ಮನ ಮೆಚ್ಚಿದ ಹೆಂಡತಿ, ಖುಷಿ ಹೆಚ್ಚಿಸುವ ಮಗ, ಸಮಾಜದಲ್ಲಿ ವಿಶೇಷ ಸ್ಥಾನಮಾನ, ಯಾರಿಗೂ ಸಾಲ ಕೊಡಬೇಕಿಲ್ಲ ಎಂಬ ನಿರಾಳ ಭಾವ... ಲೈಫ್ ಈಸ್ ಬ್ಯೂಟಿಫುಲ್ ಎನ್ನಲು ಇಷ್ಟು ಸಾಕಲ್ಲವೇ? ರಂಗಸ್ವಾಮಿಯೂ ಇಂಥದೇ ಸಂಭ್ರಮದಲ್ಲಿದ್ದ. ಆಗಲೇ, ಯಾರೂ ನಿರೀಕ್ಷಿಸದ ಆಘಾತವೊಂದು ಅವನನ್ನು ಅಪ್ಪಳಿಸಿತು. ಅದೊಂದು ದಿನ ಮಾರ್ಕೆಟ್‌ಗೆ ಹೋಗಿ ವಾಪಸಾಗುತ್ತಿದ್ದ ರಂಗಸ್ವಾಮಿಯ ಪತ್ನಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ... 

*** 

‘ಈಗಾಗ್ಲೇ ನನಗೂ ನಲವತ್ತೈದು ತುಂಬಿದೆ. ಮಗ 7ನೇ ಕ್ಲಾಸ್‌ಗೆ ಬಂದಿದಾನೆ. ಹೀಗಿರುವಾಗ ಇನ್ನೊಂದು ಮದುವೆಯಾಗಿ ಸಾಧಿಸೋದೇನಿದೆ? ಸೆಕೆಂಡ್ ಮ್ಯಾರೇಜ್ ಮಾಡ್ಕೊಂಡೆ ಅಂತಿಟ್ಕೊಳ್ಳಿ, ಹೊಸದಾಗಿ ಬಂದ ಹೆಂಡತಿ ನನ್ನ ಮಗನನ್ನು ತಿರಸ್ಕಾರದಿಂದ ನೋಡಿಬಿಟ್ರೆ, ಅಥವಾ ಹೆಂಡತಿಯ ಮೇಲಿನ ಮೋಹದಿಂದ ನಾನೇ ವಿಲನ್ ಥರಾ ವರ್ತಿಸಿಬಿಟ್ರೆ? ಬೇಡ ಬೇಡ. ಇಂಥ ಸಂದರ್ಭಗಳು ಜೊತೆಯಾಗೋದೇ ಬೇಡ. ನನಗಿನ್ನು ಮಗನೇ ಸರ್ವಸ್ವ . ಹೆಂಡತಿಯ ನೆನಪನ್ನು ಜೊತೆಗಿಟ್ಟುಕೊಂಡೇ ಇವನನ್ನು ಚೆನ್ನಾಗಿ ಓದಿಸ್ತೇನೆ...’. ಎರಡನೇ ಮದುವೆ ಮಾಡಿಕೊಳ್ಳಪ್ಪಾ ಎಂದು ಒತ್ತಾಯಿಸಲು ಬಂದ ಬಂಧುಗಳು ಹಾಗೂ ಹಿತೈಷಿಗಳಿಗೆ ರಂಗಸ್ವಾಮಿ ಹೇಳಿದ ಖಡಕ್ ಮಾತುಗಳಿವು. 


ರಂಗಸ್ವಾಮಿ ಮಾತಿಗೆ ತಪ್ಪಲಿಲ್ಲ. ಅವನು ಮಗನನ್ನು ಕಣ್ರೆಪ್ಪೆಯಷ್ಟು ಜೋಪಾನವಾಗಿ ನೋಡಿಕೊಂಡ. ಒಳ್ಳೆಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿಸಿದ. ನನಗೆ ನೀನೇ ಪ್ರಪಂಚ. ನೀನು ಜೊತೆಗಿಲ್ಲದೆ ನಾನು ಬದುಕಲಾರೆ ಎಂಬುದನ್ನು ಪರೋಕ್ಷವಾಗಿ ಮನದಟ್ಟು ಮಾಡಿಕೊಟ್ಟ.ಮುಂದೊಂದು ದಿನ- ‘ನನ್ನ ಕ್ಲಾಸ್ ಮೇಟ್ ಹುಡುಗೀನ ಲವ್ ಮಾಡಿದೀನಪ್ಪಾ. ಅವಳನ್ನೇ ಮದುವೆ ಆಗ್ತೀನಿ. ಅವರ ಮನೇಲಿ ಒಪ್ಪಿದಾರೆ. ನಿನ್ನ ಒಪ್ಪಿಗೆ ಬೇಕಪ್ಪಾ...’ ವಿಧೇಯನಾಗಿಯೇ ಹೇಳಿದ್ದ ಮಗ. ರಂಗಸ್ವಾಮಿ ಅದನ್ನೂ ಆಕ್ಷೇಪಿಸಲಿಲ್ಲ. ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟ. ಇದಾಗಿ ವರ್ಷ ಕಳೆಯುತ್ತಲೇ ಫ್ಯಾಕ್ಟರಿ ವ್ಯವಹಾರವನ್ನೆಲ್ಲ ಮಗನಿಗೆ ವಹಿಸಿಕೊಟ್ಟು, ‘ನನಗೆ ವಯಸ್ಸಾಯಿತು ಕಣಪ್ಪಾ. ರೆಸ್ಟ್ ಬೇಕು ಅನ್ನಿಸ್ತಿದೆ. ಇನ್ಮುಂದೆ ನಾನು ಮನೇಲಿರ್ತೀನಿ. ಶ್ರದ್ಧೆ ಮತ್ತು ಎಚ್ಚರದಿಂದ ಫ್ಯಾಕ್ಟರಿ ನಡೆಸ್ಕೊಂಡು ಹೋಗು’ ಎಂದಿದ್ದ. ಮರುದಿನವೇ ವಕೀಲರ ಜೊತೆಗೂ ಮಾತಾಡಿ ಫ್ಯಾಕ್ಟರಿಯನ್ನು ಮಗನ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಬಿಟ್ಟ. 


ಚಿತ್ರಾನ್ನ-ಕಾಯಿಚಟ್ನಿ, ದೋಸೆ-ಜಾಮೂನ್, ಬಿಸಿಬೇಳೆಬಾತ್- ಚಿಪ್ಸ್, ವಾಂಗೀಬಾತ್-ಆಲೂಬೋಂಡಾ, ಪಲಾವ್-ಗಟ್ಟಿಮೊಸರು- ಹೀಗೆ ಪ್ರತಿಯೊಂದು ತಿಂಡಿಗೂ ಒಂದು ಸೈಡ್ ಐಟಂ ಇರಬೇಕು ಎಂಬುದು ರಂಗಸ್ವಾಮಿಯ ಆಸೆಯಾಗಿತ್ತು. ಅದರಲ್ಲೂ ಪಲಾವ್-ಮೊಸರು ಅವನ ಮೆಚ್ಚಿನ ತಿಂಡಿಯಾಗಿತ್ತು. ನಾವು ಎಷ್ಟು ದಿನ ಇರ್ತೀವೋ ಗೊತ್ತಿಲ್ಲ. ಇರುವಷ್ಟು ದಿನ ಚೆನ್ನಾಗಿ ತಿಂದುಂಡು ಬಾಳಬೇಕು ಎಂಬುದು ಅವನ ವಾದವಾಗಿತ್ತು. 


ಅವತ್ತು ರಂಗಸ್ವಾಮಿಯ ಮಗ ಜಾಗಿಂಗ್ ಮುಗಿಸಿ ಬಾಗಿಲ ಬಳಿ ಬಂದಾಗಲೇ ಪಲಾವ್‌ನ ಘಮ ಮೂಗಿಗೆ ಅಡರಿತು. ಓಹ್, ಇವತ್ತು ಅಪ್ಪನ ಫೇವರಿಟ್ ತಿಂಡಿ ಎಂದುಕೊಂಡು ಅವನು ಒಳಬರುವುದಕ್ಕೂ, ಡೈನಿಂಗ್ ಟೇಬಲ್ ಮುಂದೆ ತಿಂಡಿಗೆ ಕುಳಿತಿದ್ದ ರಂಗಸ್ವಾಮಿ- ಸ್ವಲ್ಪ ಮೊಸರು ಇದ್ರೆ ಕೊಡಮ್ಮ. ಪಲಾವ್ ಜೊತೆ ಮೊಸರು ಕೊಡೋದನ್ನೇ ಮರೆತಿದ್ದೀಯಲ್ಲ.. ಅನ್ನುವುದಕ್ಕೂ ಸರಿಹೋಯಿತು. ರಂಗಸ್ವಾಮಿಯ ಸೊಸೆ ಸರ್ರನೆ ಹೊರಬಂದವಳೇ- ‘ಇಲ್ಲ, ಮೊಸರಿಲ್ಲ; ಮೊಸರು ಖಾಲಿಯಾಗಿದೆ’ ಅಂದು ಭರ್ರನೆ ಹೋಗಿಬಿಟ್ಟಳು. ಹೌದಾ? ಹೋಗ್ಲಿ ಬಿಡಮ್ಮ ಎನ್ನುತ್ತಾ ರಂಗಸ್ವಾಮಿ ತಿಂಡಿಯ ಶಾಸ್ತ್ರ ಮುಗಿಸಿದ. 


ದಿನವೂ ಹೆಂಡತಿಯೊಂದಿಗೆ ತಿಂಡಿ ತಿಂದು ನಂತರ ಫ್ಯಾಕ್ಟರಿಗೆ ಹೋಗುವುದು ರಂಗಸ್ವಾಮಿಯ ಮಗನ ದಿನಚರಿಯಾಗಿತ್ತು. ಅವತ್ತೂ ಹಾಗೆಯೇ ತಿಂಡಿಗೆ ಕೂತವನು ಅಸಹನೆ ಮತ್ತು ಗೊಂದಲದಿಂದ ಹೆಂಡತಿಯನ್ನು ನೋಡಿದ. ಕಾರಣ; ಹೆಂಡತಿ ತಂದಿಟ್ಟ ತಿಂಡಿಯೊಂದಿಗೆ ಅರ್ಧ ಲೀಟರಿನಷ್ಟು ಗಟ್ಟಿ ಮೊಸರಿತ್ತು. ''ಅಪ್ಪ ಕೇಳಿದಾಗ ಮೊಸರೇ ಇಲ್ಲ ಅಂದೆಯಲ್ಲ? ಇದು ಎಲ್ಲಿತ್ತು? ಯಾಕೆ ಸುಳ್ಳು ಹೇಳ್ದೆ?'' ಎಂದು ಪ್ರಶ್ನಿಸಿದ. ಆಕೆ- ‘ಗಟ್ಟಿಯಾಗಿ ಮಾತಾಡಬೇಡಿ. ಸೈಲೆಂಟಾಗಿ ತಿಂಡಿ ತಿನ್ನಿ. ನಿಮ್ಮಪ್ಪ ಕೇಳ್ತಾರೆ ಅಂತ ಅವರು ಕೇಳಿದ್ದನ್ನೆಲ್ಲ ಕೊಡೋಕಾಗುತ್ತಾ? ಬಾಯಿ ಚಪಲ ಯಾವತ್ತೂ ಒಳ್ಳೆಯದಲ್ಲ. ಇವತ್ತು ಮೊಸರು ಕೇಳ್ತಾರೆ. ನಾಳೆ ತುಪ್ಪಾನೇ ಬೇಕು ಅಂತಾರೆ. ಕೇಳಿದ್ದನ್ನೆಲ್ಲ ರೆಡಿ ಮಾಡಿ ಇಟ್ಕೊoಡಿರೋಕೆ ಆಗುತ್ತಾ?’ ಅಂದುಬಿಟ್ಟಳು. ತಿರುಗಿ ಮಾತಾಡಿದರೆ ಜಗಳ ಆಗುತ್ತೆ. ಜಗಳ ಆಗಿಬಿಟ್ರೆ ರಾತ್ರಿ ಅನ್ನೋದು ನರಕ ಆಗುತ್ತೆ. ಉಹೂಂ, ಅಂಥ ಪರಿಸ್ಥಿತಿ ಜೊತೆಯಾಗಬಾರದು ಎಂದು ಯೋಚಿಸಿದ ರಂಗಸ್ವಾಮಿಯ ಮಗ, ಮೌನವಾಗಿ ಫ್ಯಾಕ್ಟರಿಗೆ ಹೋಗಿಬಿಟ್ಟ. ರಂಗಸ್ವಾಮಿ, ಮನೆಯ ಹೊರಗಿನ ಕೈ ತೋಟದಲ್ಲಿ ಇದ್ದುದರಿಂದ ಗಂಡ-ಹೆಂಡಿರ ದುಸುಮುಸು ಅವನಿಗೆ ಗೊತ್ತಾಾಗಲೇ ಇಲ್ಲ. 


ಅವತ್ತು ನಾಲ್ಕೈದು ಕಂಪನಿಗಳ ಮುಖಂಡರೊಂದಿಗೆ ಹೋಟೆಲೊಂದರಲ್ಲಿ ವ್ಯವಹಾರ ಸಂಬಂಧಿ ಮೀಟಿಂಗ್ ನಡೆಸಬೇಕಾಗಿ ಬಂತು. ಊಟದ ಸಮಯದಲ್ಲಿ ಅವರೆಲ್ಲಾ- ''ಊಟ ಬೇಡ, ದೋಸೆ ವಡಾ ಥರದ ಐಟಮ್ಸ್ ತಗೊಳ್ಳೋಣ. ಕಡೆಗೆ ಮೊಸರನ್ನ ಇರಲಿ''ಎಂದರು. ಮೊಸರನ್ನದಲ್ಲಿದ್ದ ಕೆನೆಮೊಸರು, ದಾಳಿಂಬೆ, ಗೋಡಂಬಿಯ ಚೂರುಗಳನ್ನು ಕಂಡಾಗ ಛಕ್ಕನೆ, ಮೊಸರು ಇದ್ಯಾ ಎಂದು ಕೇಳಿದ ಅಪ್ಪನ ಮುಖವೇ ಎದುರು ಕಂಡಂತಾಗಿ ರಂಗಸ್ವಾಮಿಯ ಮಗ ತತ್ತರಿಸಿಹೋದ. ತನಗಾಗಿ ಏನೆಲ್ಲಾ ತ್ಯಾಗ ಮಾಡಿದ ತಂದೆಗೆ ಒಂದು ಕಪ್ ಗಟ್ಟಿ ಮೊಸರು ಕೊಡಲು ಆಗಲಿಲ್ಲವಲ್ಲ ಎಂಬ ಚಿಂತೆ ಅವನನ್ನು ಕ್ಷಣಕ್ಷಣಕ್ಕೂ ಕಾಡತೊಡಗಿತು. 


ಉಹೂಂ, ಅವನ ಹೆಂಡತಿಗೆ ಇಂಥ ಯಾವ ‘ಗಿಲ್ಟ್ ಕೂಡ ಇರಲಿಲ್ಲ. ಪ್ರತಿಯೊಂದು ತಿಂಡಿಗೂ ಮತ್ತೊಂದು ಸೈಡ್ ಐಟಂ ಹಾಕಿಕೊಡೋಕೆ ಇದೇನು ಹೋಟ್ಲಾ? ಇಡೀ ದಿನ ಮನೇಲಿ ಇರೋರು ಕೊಟ್ಟಿದ್ದನ್ನು ತಿಂದುಕೊಂಡು ತೆಪ್ಪಗಿರಬೇಕು ಅಲ್ವ ಎಂದೇ ಅವಳು ವಾದಿಸಿದಳು. ಬೆಡ್‌ರೂಂ, ಜಗಳದ ತಾಣವಾದರೆ ಇಡೀ ದಿನದ ಕೆಲಸ ಕೆಡುತ್ತೆ ಎಂದು ಗೊತ್ತಿದ್ದುದರಿಂದ ರಂಗಸ್ವಾಮಿಯ ಮಗ ಹೆಂಡತಿಗೆ ಎದುರು ಮಾತಾಡಲು ಹೋಗಲಿಲ್ಲ. 


ಹೀಗೇ ವಾರ ಕಳೆಯಿತು. ಅವತ್ತೊಂದು ದಿನ- ‘ಯಾವುದೋ ಕೋರ್ಟ್ ಕೇಸ್ ಬಂದಿದೆಯಪ್ಪಾ. ನನಗೆ ಸ್ವಲ್ಪ ಕನ್‌ಫ್ಯೂಶನ್ ಇದೆ. ನೀನು ಜೊತೆಗಿದ್ರೆ ದೊಡ್ಡ ಧೈರ್ಯ. ಮಧ್ಯಾಹ್ನ ಬೇಗ ಬಂದ್ಬಿಡೋಣ...’ ಎಂದೆಲ್ಲ ಹೇಳಿ ಆ ಮಗರಾಯ ತಂದೆಯೊಂದಿಗೆ ಕೋರ್ಟ್‌ಗೆ ಬಂದ. ಅಲ್ಲಿ ನೋಡಿದರೆ- ಫ್ಯಾಕ್ಟರಿ, ಮನೆ ಮತ್ತು ಇಡೀ ಆಸ್ತಿಯನ್ನು ರಂಗಸ್ವಾಮಿಯ ಹೆಸರಿಗೆ ಮರು ವರ್ಗಾಯಿಸಿದ ದಾಖಲೆ ಪತ್ರಗಳಿದ್ದವು. ಅವಕ್ಕೆಲ್ಲಾ ತುಂಬಾ ಒತ್ತಾಯದಿಂದಲೇ ಸಹಿ ಹಾಕಿಸಿದ ಮಗ- ‘ಅಪ್ಪಾ, ನೀನು ಇನ್ನೊಂದು ಮದುವೆ ಮಾಡ್ಕೊಳಪ್ಪಾ. ಜನ ಏನಾದ್ರೂ ಅಂದುಕೊಳ್ಳಲಿ. ಅದರ ಬಗ್ಗೆ ಚಿಂತೆ ಮಾಡ್ಬೇಡ. ನಿನ್ನ ಜೊತೆಗೆ ನಾನಿರ್ತೀನಿ. ಈ ವಿಷಯದಲ್ಲಿ ನಿಂಗೆ ಸಪೋರ್ಟ್ ಮಾಡ್ತೀನಿ. ದಯವಿಟ್ಟು ಇನ್ನೊಂದು ಮದುವೆ ಮಾಡ್ಕೊ..’ ಅಂದ. 


ಈ ಮಾತುಗಳಿಂದ ರಂಗಸ್ವಾಮಿಗೆ ಅಚ್ಚರಿಯಾಯಿತು. ‘ಯಾಕಪ್ಪಾ? ಯಾಕೆ ಹೀಗೆ ಹೇಳ್ತಿದೀಯ? ನಿನಗೆ ಏನಾದ್ರೂ ಕೊರತೆ ಆಯ್ತಾ? ನಾನು ನಿನಗೆ ಹೊರೆ ಅನ್ನಿಸಿಬಿಟ್ನಾ? ಏನಾದ್ರೂ ತಪ್ಪು ಮಾಡಿದೀನೇನೋ ನಾನು? ಎಲ್ಲವನ್ನೂ ನನ್ನ ಹೆಸರಿಗೇ ಮಾಡಿಸಿದೀಯಲ್ಲ ಯಾಕೋ.., 


ಈ ಮಾತುಗಳನ್ನು ಅಷ್ಟಕ್ಕೇ ತಡೆದ ರಂಗಸ್ವಾಮಿಯ ಮಗ ಹೇಳಿದ: ಛೆ,ಛೆ ಖಂಡಿತ ನಿನ್ನಿಂದ ಯಾವುದೇ ತಪ್ಪಾಗಿಲ್ಲಪ್ಪಾ. ಪ್ರತಿ ಹೆಂಗಸು, ತನ್ನ ಗಂಡ ಮತ್ತು ಮಕ್ಕಳ ಬಗ್ಗೆ ಮಾತ್ರ ವಿಶೇಷ ಕಾಳಜಿ ವಹಿಸ್ತಾಳೆ. ಉಳಿದವರನ್ನು ನಿರ್ಲಕ್ಷ್ಯದಿಂದ ನೋಡೋದು ಅವಳಿಗೆ ಅಭ್ಯಾಸ ಆಗಿಬಿಟ್ಟಿರುತ್ತೆ. ಅಂಥದೊಂದು ನಿರ್ಲಕ್ಷ್ಯದ ಅನುಭವ ನಿನಗೆ ಎಂದೆಂದೂ ಆಗದಿರಲಿ ಎಂಬ ಸದಾಶಯದಿಂದಲೇಇನ್ನೊಂದು ಮದುವೆ ಆಗು ಅಂತ ಒತ್ತಾಯಿಸ್ತಾ ಇದೀನಿ. ನಾಳೆಯಿಂದ ನಾನು ಹೆಂಡತಿಯೊಂದಿಗೆ ಬಾಡಿಗೆ ಮನೆಗೆ ಹೋಗ್ತೇನೆ. ಫ್ಯಾಕ್ಟರಿಗೆ ನೀನು ಎಂ.ಡಿ., ನೀನೇ ಸಿ.ಇ.ಒ. ನಾನು ಒಬ್ಬ ನೌಕರನಾಗಿ ಕೆಲಸ ಮಾಡ್ತೀನಿ. ನಮ್ಮಲ್ಲಿ ಎಂಜಿನಿಯರ್‌ಗಳಿಗೆ ಕೊಡ್ತೀಯಲ್ಲ; ಅಷ್ಟೇ ಸಂಬಳವನ್ನು ನನಗೂ ಕೊಡು. ಒಂದು ಬಟ್ಟಲಿನಷ್ಟು ಮೊಸರು ಸಂಪಾದಿಸಲು ಮನುಷ್ಯನಿಗೆ ಎಷ್ಟು ಕಷ್ಟ ಇದೆ ಎಂಬುದನ್ನು ನನ್ನ ಹೆಂಡತಿಗೆ ಪರಿಚಯ ಮಾಡಿಕೊಡಬೇಕು. ಅದರ ಜೊತೆಗೆ, ವೃದ್ಧಾಪ್ಯದಲ್ಲಿ ತುಂಬಾ ಮುತುವರ್ಜಿಯಿಂದ ನೋಡಿಕೊಳ್ಳುವ ಒಬ್ಬರು ನಿನ್ನೊಂದಿಗೆ ಇರುವಂತೆ ವ್ಯವಸ್ಥೆ ಮಾಡಬೇಕು. ಫ್ಯಾಕ್ಟರಿಯನ್ನು ನಿನ್ನ ಹೆಸರಿಗೆ ವರ್ಗಾಯಿಸಿದ್ದಕ್ಕೆ, ನಾಳೆಯಿಂದ ಒಬ್ಬ ಆರ್ಡಿನರಿ ನೌಕರನಾಗಿ ಕೆಲಸಕ್ಕೆ ಬರ್ತಿರೋದಕ್ಕೆ ಬೇರೆ ಯಾವ ಕಾರಣವೂ ಇಲ್ಲ. ಒಳ್ಳೇದಾಗ್ಲಿ ಅಂತ ಆಶೀರ್ವದಿಸಪ್ಪ...’ 


ರಂಗಸ್ವಾಮಿ ಏನೂ ಮಾತಾಡಲಿಲ್ಲ. ನಡೆದಿರುವುದೇನೆಂದು ತನಗೆ ಅರ್ಥವಾಗಿದೆ ಎಂಬಂತೆ ಮಗನನ್ನು ಮೆಚ್ಚುಗೆಯಿಂದ ನೋಡಿದ. 

ಅವನನ್ನು ಬಾಚಿ ತಬ್ಬಿಕೊಂಡು ಹಣೆಗೆ ಮುತ್ತಿಟ್ಟ........


ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಸಾಕು,

ಅವರೇ ಅವರ ಜೀವನವನ್ನ ಸುಂದರ ಮಾಡಿಕೊಳ್ಳುತ್ತಾರೆ,


ಹಣ, ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಎಲ್ಲಾ ವ್ಯರ್ಥ....


*ಸಂಸ್ಕಾರ ಮುಖ್ಯ*

Thursday, October 29, 2020

ಕಥೆಗಳ ಸಂಗ್ರಹ

ಆತ್ಮವಿಶ್ವಾಸದ ಕಥೆ

 ಆತ್ಮವಿಶ್ವಾಸ.


ವ್ಯವಹಾರದಲ್ಲಿ ತುಂಬಲಾರದ ನಷ್ಟ ಕಂಡ ಬಿಜಿನೆಸ್‌ಮ್ಯಾನ್ ಒಬ್ಬ ಪಾರ್ಕಿನ ಕಲ್ಲುಬೆಂಚಿನ ಮೇಲೆ ಕುಳಿತಿದ್ದ. ಇನ್ನೇನು ಆಕಾಶವೇ ಕಳಚಿ ತಲೆಮೇಲೆ ಬೀಳುತ್ತದೆ ಎಂಬಂತಿತ್ತು ಅವನ ಮುಖ. ಸಾಲಗಾರರು ಬೆನ್ನ ಹಿಂದೆ ಬಿದ್ದಿದ್ದರು, ಪಾಲುದಾರರು ಹಣ ಕೇಳುತ್ತಿದ್ದರು, ಕೆಲಸಗಾರರಿಗೆ ಸಂಬಳ ಕೊಡಬೇಕಿತ್ತು….ಹೀಗೆ ಸಮಸ್ಯೆಗಳ ಸರಮಾಲೆ ಆತನ ಕುತ್ತಿಗೆಗೆ ಸುತ್ತಿಕೊಂಡಿತ್ತು. 


ಆಗ ಅಲ್ಲಿಗೆ ಮುದುಕನೊಬ್ಬ ಬಂದ. ಬಿಜಿನೆಸ್‌ಮ್ಯಾನ್‌ನ ಮುಖ ನೋಡಿದರೆ ಆತ ಕಷ್ಟದಲ್ಲಿದ್ದಾನೆಂದು ಯಾರು ಬೇಕಾದರೂ ಸುಲಭವಾಗಿ ಹೇಳಬಹುದಿತ್ತು. ‘ಏನಪ್ಪಾ ನಿನ್ನ ಸಮಸ್ಯೆ?’ ಅಂತ ಮುದುಕ ನೇರವಾಗಿ ವಿಷಯಕ್ಕೆ ಬಂದ. ಈತ ತನ್ನೆಲ್ಲ ಕಷ್ಟಗಳನ್ನು ಹೇಳಿಕೊಂಡ. ಸಾಯುವುದೊಂದೇ ಈಗ ಕಾಣಿಸುತ್ತಿರುವ ದಾರಿಯೆಂದು ಹೇಳಿ ಕಣ್ಣೀರಾದ.


ಆಗ ಮುದುಕ ‘ನಾನು ನಿನಗೆ ಸಹಾಯ ಮಾಡುತ್ತೇನೆ. ಯೋಚಿಸಬೇಡ’ ಎಂದು ಹೇಳಿ ಈತನ ಹೆಸರಿನಲ್ಲಿ ಚೆಕ್ ಒಂದನ್ನು ಬರೆದುಕೊಟ್ಟ. ‘ಈ ಹಣ ತೆಗೆದುಕೋ. ನಿನ್ನ ಆರ್ಥಿಕ ಸಮಸ್ಯೆಗಳನ್ನೆಲ್ಲ ಮೊದಲು ಬಗೆ ಹರಿಸಿಕೋ. ಒಂದು ವರ್ಷದ ನಂತರ ಇದೇ ದಿನ, ಇದೇ ಜಾಗಕ್ಕೆ ಬಾ. ಆಗ ನನಗೆ ಹಣ ವಾಪಸ್ ಮಾಡು. ಒಂದು ವರ್ಷ ಸಮಯವಿದೆ, ಬೇಕಾದಷ್ಟು ಹಣವಿದೆ. ನೋಡು ಏನು ಮಾಡ್ತೀಯ’ ಅಂತ ಹೇಳಿ ಬೆನ್ನು ತಿರುಗಿಸಿ ಹೊರಟೇ ಬಿಟ್ಟ!


ಬಿಜಿನೆಸ್‌ಮ್ಯಾನ್ ಚೆಕ್ ತೆಗೆದು ನೋಡಿ ಅವಾಕ್ಕಾದ. 5,00,000 ಡಾಲರ್‌ನ ಚೆಕ್‌ನ ಕೊನೆಗೆ ಅತ್ಯಂತ ಶ್ರೀಮಂತನಾಗಿದ್ದ ಜಾನ್ ಡಿ ರಾಕ್ಫೆಲ್ಲರ್‌ನ ಸಹಿ ಇತ್ತು! ಅರೇ, ಅವರನ್ನು ನಾನು ಗುರುತಿಸಲೇ ಇಲ್ಲವಲ್ಲ ಎಂದು ಬಿಜಿನೆಸ್‌ಮ್ಯಾನ್ ಕೈ ಕೈ ಹಿಸುಕಿಕೊಂಡ. ನನ್ನೆಲ್ಲ ಕಷ್ಟಗಳು ಒಂದೇ ಕ್ಷಣದಲ್ಲಿ ನಿವಾರಣೆಯಾದವೆಂದು ಹಿಗ್ಗಿದ. ಆದರೂ ಆ ಚೆಕ್‌ ಅನ್ನು ನಗದು ಮಾಡಿಸಿಕೊಳ್ಳಬಾರದೆಂದು ನಿರ್ಧರಿಸಿದ. 


ಅಷ್ಟೊಂದು ದೊಡ್ಡ ಚೆಕ್ ಇದೆ ಎಂಬುದೇ ಆತನಿಗೆ ಬೆಟ್ಟದಷ್ಟು ಆತ್ಮವಿಶ್ವಾಸ ನೀಡಿತ್ತು. ಆತ ಹೊಸ ಹುರುಪಿನೊಂದಿಗೆ ವ್ಯವಹಾರ ಶುರುಮಾಡಿದ. ಹೊಸ ಸಾಲಗಳನ್ನು ಮಾಡಿ, ಹಳೆಯ ಬಾಕಿಗಳನ್ನು ತೀರಿಸಿದ. ಕೆಲವೊಂದಿಷ್ಟು ಮಹತ್ವದ ನಿರ್ಧಾರಗಳ ಮೂಲಕ ವ್ಯವಹಾರವನ್ನು ಹಂತ ಹಂತವಾಗಿ ಮೇಲಕ್ಕೆ ತಂದ. ಮೂರು-ನಾಲ್ಕು ತಿಂಗಳುಗಳಲ್ಲಿ ಆತ ಸಾಲದ ಹೊರೆಯಿಂದ ಮುಕ್ತನಾದ. ವ್ಯವಹಾರ ಸುಗಮವಾಗಿ ನಡೆಯತೊಡಗಿತು.


ಕೊಟ್ಟ ಮಾತಿನಂತೆ ಸರಿಯಾಗಿ ಒಂದು ವರ್ಷದ ಬಳಿಕ ಬಿಜಿನೆಸ್‌ಮ್ಯಾನ್ ಅದೇ ಪಾರ್ಕ್‌ಗೆ ಹೋದ. ಕೈಯಲ್ಲಿ ನಗದು ಮಾಡಿಸಿಕೊಳ್ಳದ ಚೆಕ್ ಇತ್ತು. ಹೇಳಿದ ಸಮಯಕ್ಕೆ ಆ ಶ್ರೀಮಂತ ಮುದುಕನೂ ಬಂದ. ಇನ್ನೇನು ಚೆಕ್ ವಾಪಸ್ ಮಾಡಿ, ತನ್ನ ಯಶಸ್ಸಿನ ಕಥೆ ಹೇಳಬೇಕೆನ್ನುವಷ್ಟರಲ್ಲಿ ಹಿಂದಿನಿಂದ ನರ್ಸ್ ಒಬ್ಬಳು ಓಡಿ ಬರುತ್ತಿರುವುದು ಕಾಣಿಸಿತು. ಆಕೆ ಏದುಸಿರು ಬಿಡುತ್ತಾ ಓಡಿ ಬಂದು ಮುದುಕನನ್ನು ಗಟ್ಟಿಯಾಗಿ ಹಿಡಿದುಕೊಂಡಳು. ‘ಅಬ್ಬಾ ದೇವರೇ ಕೊನೆಗೂ ಈತನನ್ನು ಹಿಡಿದುಬಿಟ್ಟೆ!’ ಎಂದು ಜೋರಾಗಿ ಉಸಿರಾಡುತ್ತಾ ಉದ್ಘರಿಸಿದಳು. ‘ನಿಮಗೆ ಈತ ಏನೂ ತೊಂದರೆ ಕೊಟ್ಟಿಲ್ಲ ಎಂದು ಭಾವಿಸಿದ್ದೇನೆ. ಅಯ್ಯೋ ಈತನೊಬ್ಬ ಹುಚ್ಚು ಮುದುಕ. ಪದೇ ಪದೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗುವ ಚಟ. ತನ್ನನ್ನು ತಾನು ಜಾನ್ ಡಿ. ರಾಕ್ಫೆಲ್ಲರ್ ಅಂತ ಕಂಡವರಿಗೆಲ್ಲ ಪರಿಚಯಿಸಿಕೊಳ್ಳುತ್ತಾನೆ. ಅದನ್ನು ಹೌದು ಎಂದು ನಂಬುವ ಹುಚ್ಚರೂ ಇದ್ದಾರೆ’ ಎಂದು ಹೇಳಿ ಮುದುಕನನ್ನು ಎಳೆದು ಕರೆದುಕೊಂಡು ಹೋದಳು.


ಈ ಬಿಜಿನೆಸ್‌ಮ್ಯಾನ್ ತನ್ನ ಮುಂದೆ ನಡೆದಿದ್ದು ಕನಸೋ, ನಿಜವೋ ಎಂದು ತಿಳಿಯದೆ ಬೆಪ್ಪನಂತೆ ನಿಂತಿದ್ದ. ಒಂದಿಡೀ ವರ್ಷ ಆತ ತನ್ನ ಬಳಿ ಅರ್ಧ ಮಿಲಿಯನ್ ಡಾಲರ್ ಹಣ ಇದೆ ಎಂದು ಭ್ರಮಿಸಿ ವ್ಯಾಪಾರ- ವ್ಯವಹಾರವನ್ನು ವಿಸ್ತರಿಸುತ್ತಾ, ಸಾಲ ಮಾಡಿ, ಸಾಲ ತೀರಿಸುತ್ತಾ ಹೋದ. ಆದರೀಗ ಗೊತ್ತಾಗಿದ್ದೇನೆಂದರೆ ಇವನ ಬಳಿ ಇದ್ದದ್ದು ಅರ್ಧ ಮಿಲಿಯನ್ ಡಾಲರ್ ಚೆಕ್ ಅಲ್ಲ, ಯಾವನೋ ಒಬ್ಬ ಹುಚ್ಚ ಕೊಟ್ಟಿದ್ದ ಕಾಗದದ ಚೂರು! 


ಹಾಗಾದರೆ ತನ್ನ ಕೈಯಲ್ಲಿ ಇನ್ನೇನೂ ಮಾಡಲು ಸಾಧ್ಯವಿಲ್ಲ ಅಂದುಕೊಂಡಿದ್ದವನಿಂದ ಅಭೂತಪೂರ್ವ ಕೆಲಸಗಳನ್ನು ಮಾಡಿಸಿದ ಆ ಶಕ್ತಿ ಯಾವುದು? ಅದುವೇ ಆತ್ಮವಿಶ್ವಾಸ! ಅದೊಂದು ನಿಮ್ಮ ಜತೆಯಿದ್ದರೆ ಎಂಥ ಅಸಾಧ್ಯವನ್ನೂ ಸಾಧ್ಯಗೊಳಿಸಬಹುದು.


ಶಿವಾರ್ಪಣಮಸ್ತು (ಸದ್ವಿಚಾರ ಸಂಗ್ರಹ)

Tuesday, September 22, 2020

ನಂಬಿಕೆ ದ್ರೋಹ ಕಥೆ ೨೧/೦೯/೨೦೨೦

 *ಮಕ್ಕಳ ಕಥೆ*

*"ನಂಬಿಕೆ ದ್ರೋಹ"*


ಒಂದು ದಟ್ಟವಾದ ಕಾಡು ಅಲ್ಲಿ ಸಾವಿರಾರು ಪ್ರಾಣಿಗಳು ಪಕ್ಷಿಗಳು ವಾಸವಾಗಿದ್ದವು. ಕಾಡಿನಲ್ಲಿನ ತರತರದ ರುಚಿ ರುಚಿಯಾದ ಹಣ್ಣುಗಳು, ಗೆಡ್ಡೆ ಗೆಣಸುಗಳು ಹೀಗೆ ನಾನಾ ಬಗೆಯ ಗಿಡಮರಗಳಿಂದ ಕಿಕ್ಕಿರಿದು ತುಂಬಿದ್ದ ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದವು. ಅಲ್ಲದೆ ಸದಾ ಗಿಡಮರಗಳಿಗೆ ನೀರುಣಿಸುವ ಜಲಪಾತಗಳು ರಭಸವಾಗಿ ಹರಿಯುತ್ತಿದ್ದವು. ಅಲ್ಲದೆ ಅಲ್ಲಿ ನವಿಲುಗಳ ಹಿಂಡು ನಾಟ್ಯವಾಡುತ್ತ ಇನ್ನಷ್ಟು ಸೊಗಸನ್ನು ಹೆಚ್ಚಿಸಿದ್ದವು. 

ಹೀಗಿರುವಾಗ ಒಂದು ದೊಡ್ದ ಮರದ ಪೊಟರೆಯಲ್ಲಿ ಗಂಡು ಮತ್ತು ಹೆಣ್ಣು ಗುಬ್ಬಿಗಳು ವಾಸವಾಗಿದ್ದವು. ಅವು ಯಾವಾಗಲೂ ಸಂತೋಷಭರಿತವಾಗಿ ಚಿಲಿಪಿಲಿಯೊಂದಿಗೆ ನಿತ್ಯವು ನಲಿಯುತ್ತಿದ್ದವು. ಪಕ್ಕದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ನದಿಯಲ್ಲಿ ಒಂದು ಮೊಸಳೆಯು ವಾಸವಾಗಿತ್ತು. ಆ ಒಂದು ಮೊಸಳೆಯ ಪರಿಚಯದೊಂದಿಗೆ ಗುಬ್ಬಿಗಳು ಒಳ್ಳೆಯ ಸ್ನೇಹಿತರಾದವು. ಗುಬ್ಬಿಗಳು ನಿತ್ಯ ಹಾರಿ ಹೊರಗಿನ ಪ್ರಪಂಚವನ್ನ ಸುತ್ತಿಬರುತ್ತಿದ್ದರಿಂದ ಹೊರಗಡೆ ನಡೆಯುವ ಸಮಾಚಾರಗಳೆಲ್ಲ ತಿಳಿದುಕೊಂಡು ಬರುತ್ತಿದ್ದವು. ಬಂದು ತಮ್ಮ ಗೆಳೆಯ ಮೊಸಳೆಗೆ ತಿಳಿಸುತ್ತಿದ್ದವು.

ಹೀಗೆ ಕಾಲ ಕಳೆಯುತ್ತಿರಲು ಗುಬ್ಬಿಗಳು ಒಂದಕ್ಕೊಂದು ಅಗಲದೆ ಅನ್ಯೂನ್ಯವಾಗಿರುವುದನ್ನ ಕಂಡ ಮೊಸಳೆಯು ಸಹಿಸಲಾರದೆ ಅವುಗಳ ಸಂಬಂಧವನ್ನ ಕದಡಿಸಬೇಕು ಅವು ಎರೆಡು ಸೇರದಂತೆ ಮಾಡಬೇಕು, ನಂತರ ಅವು ಎರೆಡು ಗುಬ್ಬಿಗಳನ್ನು ತಿಂದು ಸವಿಯಬೇಕೆಂದು ಯೋಚಿಸಿತು. ಮೊದಲೇ ಮೋಸದ ಬುದ್ಧಿಯ ಮೊಸಳೆ ದಿನಾಲು ಗುಬ್ಬಿಗಳ ಹತ್ತಿರ ಬಂದು ತನ್ನ ಮೋಸದ ಸ್ನೇಹವನ್ನ ಗಟ್ಟಿಗೊಳಿಸಿಕೊಂಡಿತು. ಅಲ್ಲದೆ ದಿನಾಲು ತಾವು ಎಲ್ಲಕಡೆ ಸುತ್ತಿಕೊಂಡು ಬರ್ತೀರಿ ಮನುಷ್ಯರ ಚಟುವಟಿಕೆಗಳನ್ನೆಲ್ಲಾ ನೋಡಿ ಬರ್ತೀರಿ. ಹೇಗಿದ್ದಾರೆ ನಿಮ್ಮ ನಾಡ ಜನಗಳು ಎಂದು ವ್ಯಂಗ್ಯವಾಗಿ ಕೇಳಿತು ಆಗ ಗೆಳೆಯ ಎಂಬ ನಂಬಿಕೆಯಿಂದ ಗುಬ್ಬಿಗಳು ಯಾವುದನ್ನು ಹೇಳಬೇಕು..? ಯಾವುದನ್ನು ಬಿಡಬೇಕು ಗೆಳೆಯ..! ಜಗದ ಜನ ಒಬ್ಬರಿಗೊಬ್ಬರು ಮೋಸ ಮಾಡುವದನ್ನು ಬಿಡಲಾರರು ಈ ಹಾಳು ಮನುಜರು ಎಂದು ಹೇಳಿತು.

ಒಮ್ಮೆ ಒಂದು ಊರಿನಲ್ಲಿ ಏನಾಯ್ತು ಗೊತ್ತಾ ಒಬ್ಬ ವ್ಯಕ್ತಿಯು ತನ್ನ ಹಲವಾರು ದಿನಗಳಿಂದ ಲಾಲನೆ ಪಾಲನೆ ಪೋಷಣೆ ಮಾಡಿ ಬೆಳೆಸಿದ ಬಾಳೆಯ ಗಿಡಗಳು ರಸಭರಿತ ಹಣ್ಣುಗಳಿಂದ ತುಂಬಿದ್ದವು. ಇನ್ನೇನು ಆ ತೋಟದ ಮಾಲೀಕ ಎರಡು - ಮೂರು ದಿನಗಳಲ್ಲಿ ಮಾರಿಕೊಂಡು ಬರಬೇಕೆಂದು ಬಯಸಿದ್ದ ಅವನ ಸ್ನೇಹವನ್ನು ಸಂಪಾದಿಸಿದ ವಂಚಕರು ಅವನನ್ನು ನಂಬಿಸುವಂತೆ ನಟಿಸಿದರು. ಆಗ ಅವರನ್ನು ನಂಬಿದ ತೋಟದ ಮಾಲೀಕ ಊರಲ್ಲಿ ಬಾಳೆ ಕಟ್ಟುಮಾಡಲು ಹಾಳುಗಳನ್ನು ಕೇಳಿ ಬರುವೆ ಅಲ್ಲಿಯವರೆಗೆ ನೀವು ನೋಡುತ್ತಿರಿ ಎಂದು ಹೇಳಿ ಹೋದ.

ಅದೇ ಸಮಯ ಕಾಯುತ್ತಿದ್ದ ವಂಚಕರು ಅವನು ಬರುವಷ್ಟರಲ್ಲಿ ಎಲ್ಲಾ ಬಾಳೆಯನ್ನು ಕಡಿದು ಹಾಕಿ ರಸಭರಿತ ಹಣ್ಣುಗಳನ್ನು ದೋಚಿಕೊಂಡು ನಂಬಿಕೆ ದ್ರೋಹ ಮಾಡಿ ಪರಾರಿಯಾಗಿದ್ದರು ನಾವುಗಳು ಬಾಳೆಗಿಡದಲ್ಲಿ ಕುಳಿತು ಆ ದೃಶ್ಯ ನೋಡಿ ಈ ಮಾನವರು ಎಷ್ಟು ನೀಚರಾಗಿದ್ದಾರಲ್ಲಾ ಎಂದು ನೆನಸಿಕೊಂಡರೆ ಬಹಳ ದುಃಖವಾಯಿತು ಗೆಳೆಯ ಅವರು ಯಾವತ್ತೂ ಉದ್ದಾರ ಆಗುವುದಿಲ್ಲ ಒಬ್ಬ ಬಡವನ ಕಣ್ಣಲ್ಲಿ ನೀರು ತರಿಸಿದ್ದಾರೆ. ಅವರಿಗೂ ಒಬ್ಬ ಬುದ್ದಿಕಲಿಸುವವನು ಹುಟ್ಟುತ್ತಾರೆ ಎಂದು ಮೊಸಳೆಗೆ ಹೇಳಿದವು.

ಮೊದಲೇ ಕುಟಿಲ ಬುದ್ಧಿಯ ಮೊಸಳೆಯು ನಾನೇ ಮೋಸಗಾರನೆಂದು ತಿಳಿದಿದ್ದೆ ಈ ಮಾನವರು ನನಗಿಂತಲೂ ಅತೀ ಮೋಸಗಾರರಿದ್ದಾರೆ ಎಂದು ಅರಿತು ಮನದಲ್ಲೇ ತನ್ನ ಗುಣವನ್ನ ನೆನೆದು ಛೇ ನಾನು ಈ ರೀತಿಯ ಮೋಸ ಮಾಡುವುದು ಸರಿಯಲ್ಲ ಇವುಗಳ ಜೊತೆಗೆ ಸ್ನೇಹದಿಂದ ಇದ್ದು ಎಲ್ಲರ ಪ್ರೀತಿ ಗಳಿಸೋಣ ಎಂದು ಚಿಂತಿಸಿ ತನ್ನ ದುಷ್ಟಗುಣ ಮರೆತು ಒಳ್ಳೆಯ ತನದ ಬೆಳವಣಿಗೆಯಲ್ಲಿ ನಡೆಯಿತು.


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*

ಸಿಂಚನಾಳ ದೃಢ ನಿರ್ಧಾರ ಕಥೆ ೨೦/೦೯/೨೦೨೦

 *೧೬೬ನೇ ಕವಿಗೋಷ್ಠಿ*

      *ಮಕ್ಕಳ ಕಥೆ*

   *ಸಿಂಚನಾಳ ದೃಢ ನಿರ್ಧಾರ*


ಒಂದು ಊರಿನಲ್ಲಿ ಒಬ್ಬ ರೈತನ ಮಗಳಿದ್ದಳು ಅವಳ ಹೆಸರು ಸಿಂಚನಾ ಆಕೆ ತಮ್ಮ ಹಳ್ಳಿಯ ಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದಳು ಶಾಲೆಯಲ್ಲಿಯೇ ಅತ್ಯಂತ ಜಾಣ ಹುಡುಗಿ ಆವಾಗಾವಾಗ ಶಾಲೆಗಳು ರಜೆ ಇದ್ದಾಗ ತಮ್ಮ ತಾಯಿ ತಂದೆಯರ ಜೊತೆಗೆ ಹೊಲಕ್ಕೆ ಹೋಗಿ ಸಹಾಯ ಮಾಡುತ್ತಿದ್ದಳು ಒಮ್ಮೆ ಅವರ ತಂದೆ ಹೊಲದಲ್ಲಿ ಬೆಳೆದ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡುತ್ತಿದ್ದರು ಅದನ್ನು ನೋಡಿದ ಸಿಂಚನಾ ಅಪ್ಪಾ ನೀವು ಹೀಗೆ ಯಾವುದೇ ಸುರಕ್ಷತಾ ವಸ್ತುಗಳನ್ನು ಬಳಸದೆ ಹಾಗೆ ಸಿಂಪಡಿಸುತ್ತಿರುವಿರಲ್ಲಾ ನಿಮಗೆ ಏನಾದರೂ ತೊಂದರೆ ಆದ್ರೆ ಏನ್ಮಾಡೋದು ಎಂದು ಕೇಳಿಯೇ ಬಿಟ್ಟಳು.

       ಆಗ ತಂದೆ ಏನ್ಮಾಡೋದು ಮಗಳೆ ಈ ಚಿಕ್ಕ ಹಳ್ಳಿಯಲ್ಲಿ ಎಲ್ಲಮ್ಮಾ ಅವೆಲ್ಲ ಸಿಗೋದು ನಮ್ಮ ಊರಲ್ಲಿ ಎಲ್ಲರೂ ಹೀಗೆಯೇ ತಾಯಿ ಸಿಂಪಡಿಸೋದು ಎಂದ ಮೊನ್ನೆ ಮೊನ್ನೆನೆ ಏನಾಯ್ತು ಅಂದ್ರೆ ನಮ್ಮ ಊರಲ್ಲಿ ಹೊಲದಲ್ಲಿ ತೊಗರಿ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡುವಾಗ ಕೀಟನಾಶಕ ಮೈಗತ್ತಿ ಆಸ್ಪತ್ರೆಗೆ ಹೊಯ್ದ್ರು ಚಿಕಿತ್ಸೆ ಫಲಕಾರಿಯಾಗದೆ ಸತ್ತೋದ್ನಂತೆ ಕಣಮ್ಮಾ ಎಂದ ಆಗ ಆಕೆ ಹೌದಂತೆ ಅಪ್ಪ ನಮ್ಮ ಶಾಲೆಯಲ್ಲಿ ಟೀಚರ ಹೇಳ್ತಾರೆ ವರ್ಷಕ್ಕೆ ಸಾವಿರಾರು ರೈತರು ಹೀಗೆ ಸಾವನ್ನಪ್ಪುತ್ತಾರಂತೆ ಎಂದು ತಿಳಿಸಿದ್ದಾರೆ.ವಿಜ್ಞಾನ ತಂತ್ರಜ್ಞಾನ ಇಷ್ಟು ಮುಂದುವರೆದರೂ ಇದಕ್ಕೆ ಪರಿಹಾರ ಇಲ್ಲವೇ ಎಂದು ಮುಂದೆ ತಾನು ದೊಡ್ಡವಳಾದಮೇಲೆ ಇದಕ್ಕೆ ರೈತರಿಗೆ ಅನುಕೂಲ ಆಗುವಂತೆ ಏನಾದರೂ ಪರಿಹಾರ ಕಂಡುಹಿಡಿಯಲೇಬೇಕೆಂದು ಮನಸ್ಸಿನಲ್ಲೇ ಯೋಚಿಸಿದಳು.

                         ಒಂದು ನಾಲ್ಕೈದು ದಿನಗಳು ಆಗಿರಬಹುದು ಮನೆಯಲ್ಲಿ ತನ್ನ ಚಿಕ್ಕ ತಮ್ಮನಿಗೆ ಸಣ್ಣ ವಯಸ್ಸಿನ ಮಕ್ಕಳಿಗೆ ಮಾಡುವಂತ ಇಂಜೆಕ್ಷನ್ ಚುಚ್ಚಿ ಬಿಟ್ಟಿದ್ರೂ ಆಸ್ಪತ್ರೆಯವರು ಕೂಸು ಆ ನೋವು ಸಹಿಸದೇ ಅಳೋದೇ ಅಳೋದು ಅದು ನೋಡತೀರದು ಇಷ್ಟೊಂದು ಮುಂದುವರಿಯುತ್ತಿರುವ ನಮ್ಮ ದೇಶದಲ್ಲಿ ಹೀಗೆ ಚಿಕ್ಕ ಮಕ್ಕಳಿಗೆ ಇಂಜೆಕ್ಷನ್ ಮಾಡಿದಾಗ ಕೈಕಾಲು ಬಾವುಬರದಂತೆ ಮಾಡಲು ಸಾಧ್ಯವಿಲ್ಲವೇ ಎಂಬ ಯೋಚ್ನೆ ಕೂಡ ಸಿಂಚನನ ತಲೆಯಲ್ಲಿ ಕೂತಿತು.

              ಅವರ ಪಕ್ಕದ ಹಳ್ಳಿಯಲ್ಲಿ ಒಬ್ಬ ವ್ಯಕ್ತಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿ ಸತ್ತರೆಂಬ ಸುದ್ದಿ ಕೇಳಿದಳು ಇದನ್ನೂ ಕಿವಿಯಲ್ಲಿ ಹಾಕಿಕೊಂಡ ಸಿಂಚನಾನ ಮನದಲ್ಲಿ ವಿಚಾರ ಓಡುತ್ತಿತ್ತು ದೇಶದಲ್ಲಿ ಸಾವಿರಾರು ಜನ ಹೀಗೆ ಹಾವು ಕಚ್ಚಿ ಸಾಯುತ್ತಿರುವರು ಎಂಬ ಸುದ್ದಿ ಕೇಳಿರುವೆ ಇದಕ್ಕೂ ಇನ್ನೂ ಪರಿಹಾರ ಇಲ್ಲವೇ ಎಂದು ಯೋಚಿಸಿ ಒಂದು ಗಟ್ಟಿ ನಿರ್ಧಾರಕ್ಕೆ ಬಂದಳು ಏನಾದರೂ ಮಾಡಿ ನಾನು ದೊಡ್ಡವಳಾದ್ಮೇಲೆ ಕೀಟನಾಶಕ ಸಿಂಪರಣೆಯಿಂದ ಸಾಯುವದನ್ನು ತಪ್ಪಿಸಲು ಎಲ್ಲಾ ರೈತರಿಗೆ ಕಡಿಮೆ ಹಣದಲ್ಲಿ ಸಿಗುವಂತಹ ಯಾವುದಾದ್ರೂ ರೋಬೋಟ್ ಅಥವಾ ಆಕಾಶದ ಮೂಲಕ ಸಿಂಪಡಿಸೋ ಯಂತ್ರನೋ ಕಂಡುಹಿಡಿಯಬೇಕು ಮತ್ತು ಚಿಕ್ಕ ಮಕ್ಕಳಿಗೆ ಇಂಜೆಕ್ಷನ್ ಮಾಡಿದಾಗ ಬಾವುಬರದಂತೆ ಮಾಡುವ ವ್ಯವಸ್ಥೆ ಹಾಗೂ ಹಾವು ಕಚ್ಚಿ ಸಾಯದಂತೆ ಈಗಾಗಲೇ ಎಲ್ಲರೂ ಮೋಬೈಲ್ ಉಪಯೋಗಿಸುತ್ತಿರುವುದರಿಂದ ಹಾವು ಇನ್ನೂ ಒಂದು ಕಿಲೋ ಮೀಟರ್ ದೂರದಲ್ಲಿರುವಾಗಲೇ ರೈತರಿಗೆ ಮತ್ತು ಜನರಿಗೆ ಎಚ್ಚರಿಕೆ ನೀಡುವಂತೆ ಕೂಗಿ ಹೇಳುವ ಯ್ಯಾಪನ್ನು ಕಂಡುಹಿಡಿಯಬೇಕು ಎಂದು ಇದರ ಬಗ್ಗೆ ನನ್ನ ಗೆಳೆಯ ಗೆಳತಿಯರೊಂದಿಗೆ ಚರ್ಚಿಸಿ ಮುಂದಿನ ನಮ್ಮ ಗುರಿ ಈ ಎಲ್ಲಾ ವಿಷಯಗಳ ಪರಿಹರಿಸಲು ನಮ್ಮ ಜೀವನ ಮೀಸಲಿಡಬೇಕು ಇದಕ್ಕೆಲ್ಲಾ ನಮ್ಮ ಶಿಕ್ಷಕರ ಮಾರ್ಗದರ್ಶನ ಪಡೆದು ಮುನ್ನೆಡೆಯಬೇಕು ಎಂದು ಸಿಂಚನಾ ದೃಢವಾಗಿ ನಿರ್ಧರಿಸಿದಳು.


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

Videos